– ಆನಂದ ಬೋವಿ
ತುರುಸುತ್ತಿದ್ದ ಮೈ ಕೈ ಗಳನೆಲ್ಲಾ ಕೆರ ಕೆರ ಕೆಬರಿದ ಬಸಲಿಂಗ ಮಾಸ್ತರ ಸುಮ್ಮನ ಕುಂಡ್ರಲೇ ಮಕ್ಕಳಿಗೆಲ್ಲಾ ಬೈದು, ಒಮ್ಮಿಂದೊಮ್ಮಲೆ. ನಲಿ-ಕಲಿ ಹಾಡು ಶುರು ಮಾಡಿದ. ಇಂವ ನಿಮಿಷಕೊಮ್ಮೆ ಕೆಬರುವ ಶೈಲಿಗೂ ಮಕ್ಕಳು ಜಿಗಿದು, ಜಿಗಿದು ಚೀರುತ್ತ ಹಾಡುವ ಪ್ರಾಸಕ್ಕೂ, ಹೊಂದಾಣಿಕೆ ಆಗಿ, ಸಾಲಿ ತುಂಬ ಇಂವನ ಪಾಠನ ಜೋರಾಗಿ ನಡೇಯಿತು. ಒಂದ ಸವನ ಬಿಟ್ಟು ಬಿಡದಂಗ ಇಂವ ಹಾಡಿದಂಗ ಮಕ್ಕಳೆಲ್ಲಾ ರಿಪಿಟ್ ಮಾಡುತ್ತಿದ್ದರು. ಹಾದಿಗುಂಟ ಹೋಗವರೆಲ್ಲಾ ನಮ್ಮೂರ ಶಾಲ್ಯಾಗ ಛೆಂಧ ಕಲಿಸತಾರ ಬೀಡ್ರಿ ಅನ್ನುವಂಗ ಜೋರಾಗಿದ್ದ ಹಾಡು ಶಾಲೆ ಗೊಡೆ, ಕಪೌಂಡ್, ಕಿಡಿಕಿಗಳನೆಲ್ಲಾ ದಾಟಿ ಬಿಸಿ ಊಟದ ಕೊಣಿಯೊಳಗಿನ ಕಲ್ಲವ್ವನ ಕಿವಿಗೆ ಬಡಿಯಿತು.

ಹೆಡ್ ಮಾಸ್ತರ ತಂದ ಕೊಟ್ಟ ಕಡಿಮೆ ರೇಟಿನ ಕಾಯಿಪಲ್ಲೆಗಳನೆಲ್ಲಾ ನೀರಿಗೆ ಹಾಕಿ ಇದರಾಗ ಎನ ಐತಿ ಕೊಳತ ಹೊಗೈತಿ, ಹತ್ತ ಪೈಸಾಕೂ ಶ್ಯಾಣ್ಯಾತನ ಮಾಡತನ, ಇದಕ್ಕ ಹೆಡ್ ಮಾಸ್ತರಕೀ ಬ್ಯಾರೆ ಕೇಡ, ತನ್ನ ಮುಂದ ಕುಂತ ಇಂದಿರವ್ವಗ, ಮಕ್ತುಂಬಿಗೆ ತಿವಿದ ಕಲ್ಲವ್ವ ಹಗರಕ ಹೊರಗೆ ಬಂದು ಬಸಲಿಂಗ ಮಾಸ್ತರನ ಕ್ಲಾಸಿನ ಕಿಡಕಿ ಕಡೆ ನೋಡಿದಳು.
ಕಟಮಳ್ಳಿ ಕನ್ನಡ ಶಾಲೆಯೊಳಗ ಬಿಸಿ ಊಟ ಛಾಲು ಆಗಿ ಹತ್ತ ವರ್ಷದ ಹೊತ್ತಾಯ್ತು. ಪ್ರತಿದಿನ ನಾಲ್ಕು ನೂರ ಮಕ್ಕಳಿಗೆ ಊಟ ಹಾಕುವುದು ಅಂದ್ರ ಹಸನರೀ ಕೆಲಸ ಅಲ್ಲ, ಅದರಾಗ ಇತ್ತಿತ್ತಲಾಗಿಊಟದಾಗ ಹಲ್ಲಿ ಬಂದೈತಿ, ಹುಳ ಬಿದ್ದೆತಿ, ವಿಷ ಹಾಕ್ಯಾರು ಮಕ್ಕಳ ವಾಂತಿ ಮಾಡ್ಯಾವು. ಊಟ ಮಾಡಿ ಸತ್ತ ಹೊಗ್ಯಾವು, ಇಂತಹ ಸುದ್ಧಿನೇ ದೊಡ್ಡದಾಗಿ ಬಿಸಿ ಊಟ ನೀಡುವ ಮಾಸ್ತರಗಳೆಲ್ಲಾ ಸಾಲಿ ಕಲಿಸುವದನ್ನ ಬಿಟ್ಟು. ಅಕ್ಕಿ ತೊಳೆದು, ಅನ್ನ ಕುದಿಸಿ ಚಮಚೆ ಹಿಡಕೊಂಡು ಅನ್ನ ನೀಡಾಕ ನಿಂತಿದ್ದು ಎಲ್ಲಿಯು ಸುದ್ಧಿನೇ ಅಗಲಿಲ್ಲ.
ಚುಮು ಚುಮು ಬೆಳಕಿನ್ಯಾಗ ಬಿಸಿಲು ಎರುವುದು ತಡ ಆಗಬಹುದು ಆದ್ರ ಸಾಲಿ ಕೊಣಿಯೊಳಗ ಹಾಲು ಕುದಿಯುವುದು ತಡ ಆಗುತ್ತೀರಲಿಲ್ಲ ಪ್ರಾರ್ಥನಾ ಮುಗಿಸಿ ಸಾಲ ಮಾಡಿ, ಒಬ್ಬರ ಮ್ಯಾಲ ಒಬ್ಬರು ದುಗಸಕ್ಕೊಂತ ಚೀರಾಡುವ ಹುಡಗರ ಹಿಂಡು, ಪಾಠಿ ಚೀಲದೊಳಗ ಮುಚ್ಚಿಟ್ಟಕೊಂಡಿದ್ದ ಲೋಟದ ತುಂಬ ಹಾಲು ಕುಡಿದು ಢರಕಿ ಹೊಡಿಯುತ್ತ ಪುಡಿ ಹಾಲಿನ ರುಚಿ ಹಿಡಿಸದ, ಬಾಯಿಸವರುತ್ತ ಕ್ಯಾಕಿ ಹೋಡಕೊಂತ ಶಾಲಿಯೊಳಗ ಸೇರುತ್ತಿದ್ದವು.
ಮಕ್ಕಳು ಸಾಲಿಕೋಣೆಯೊಳಗ ಹೋಗಿ ಕುಂತ ಮ್ಯಾಲ, ಒಂದು ರೌಂಡ್ ಎದೆ ಸೆಟೆಸಿ, ಹಿಂದ ಕೈ ಕಟಗೊಂಡು, ಪ್ರತಿ ರೂಮಿನ ಬಾಗಿಲು ಹಣಕಿ ಹಾಕಿ ಬರುತ್ತಿದ್ದ ಹೆಡ್ ಮಾಸ್ತರ ಅಗಸಿಮನಿ ಗುರಪ್ಪ ದೋತ್ರದ ಕಚ್ಚಿ ಸವರಕ್ಕೊಂತ ಅಡಗಿ ಮನೆಯೊಳಗ ಹೆಜ್ಜಿ ಇಟ್ರ ಸಾಕು ಗಂಭೀರವಾದ ಮುಖದಾಗ ಸಣ್ಣನಗಿ ತಗೆದುಕೊಂಡು ಕಲ್ಲವ್ವನನ್ನು ಮಾತಿಗೆ ಎಳೀತ್ತಿದ್ದ.
ಮುಖದ ತುಂಬ ಬಡಿದಿದ್ದ ಪೌಡರು, ಬೆವರ ಹನಿಗೆ ಸೋರಿ, ಹಣೆ ತುಂಬಿದ್ದ ಹೆಬ್ಬಟ್ಟ ಅಗಲದ ಕುಂಕಮಬಟ್ಟನೆಲ್ಲಾ ತಿಕ್ಯಾಡಿ ಮುಖವನೆಲ್ಲಾ ಕೆಂಪಗ ಮಾಡಿಕೊಂಡಿದ್ದ ಕಲ್ಲವ್ವ ಒಂದ ಊಸಿರಿನ್ಯಾಗ ಊರಾಗಿನ ಉಸಾಬರಿಯಲ್ಲ ಗುರಪ್ಪ ಮಾಸ್ತರನ ಮುಂದ ಒದರಿ, ಸಾಂಬಾರಿಗೆ ಒಗ್ಗರಣಿ ಹಾಕುತ್ತಿದ್ದಳು.
ಹತ್ತ ವರುಷದ ಹಿಂದ ಹಿಂಗ ಸಾಲ್ಯಾಗ ಅಡಗಿ ಮಾಡಸ್ತಾರಂತ, ಗಂಡ ಸತ್ತವರನ್ನ, ಅರ್ಧ ಮುರ್ದ ಸಾಲಿ ಕಲತವರನ್ನ ಸಾಲ್ಯಾಗ ಅಡಗಿ ಮಾಡಾಕ ತಗೋತ್ತಾರು, ಈ ಸುದ್ಧಿ ಅವು, ಇವು ಬ್ಯಾಯ್ಯಾಗ ಉಗಳ ಆಗಿ ಸಿಡಿದಿರಲಿಲ್ಲ, ಆಗ ತಾನೇ ಎಸ್.ಡಿ.ಎಂ.ಸಿ ಚೆರಮನ್ ಆಗಿ, ಮಾಸ್ತರಗಳ ಮ್ಯಾಲ ಒಂದ ಕಣ್ಣ ಇಟ್ಟಿದ್ದ ಹಿರೇಮನಿ ನಾಗನಗೌಡ. ಕಲ್ಲವ್ವನ ಹೊಚ್ಚಲ ಮುಂದ ಚಪ್ಪಲ ಕಳೆದು ನಡು ಮನ್ಯಾಗ ಬಂದ ಕುಳಿತ.
ಯಾಕ್ರೀ ಬಡವರ ಮನೆ ಕಡೆ ಬಂದೈತಿ ಗೌಡರ ಸವಾರಿ “ತಲೆ ತುಂಬ ಸೆರಗ ಮುಚ್ಚಗೊಂಡ ಕಲ್ಲವ್ವ, ಧಣ್ಯಾರ ಕಣ್ಣಾಗ ಕಣ್ಣಿಟ್ಟು ದಿಟ್ಟಿಸಿ ನೋಡಿದಳು.
“ಎನಿಲ್ಲ ಕಲ್ಲವ್ವ, ಭಾಳ ದಿವಸ ಆಗಿತ್ತು ಈ ಕಡೆ ಬರದ, ಹಂಗ ಮಾತಾಡಿಸೀ ಹೊದ್ರ ಆತು ಅಂತ ಬಂದ್ದಿದ್ನಿ, ಪಾಪ ಲಕ್ಷಣ ಇದ್ದಾಗ ರಾಣಿಯಂಗ ಇದ್ದಿ ನನಗೂ ಲಕ್ಷ್ಯ್ಮಾ ಅಂದ್ರ ಭಾಳ ಜೀವ ಇತ್ತು ನಿನಗಾದರಣ ಎನಾದರಣ ದಾರಿ ಮಾಡಬೇಕಂತ ಬಂದೇನಿ”
ಅವರಿವರ ಹೋಲಕ್ಕ, ಹೆಣ್ಣಾಳು ಆಗಿ ಕಳೆ ತಗ್ಯಾಕ ಹೋಕ್ಕಿದ್ದ ಕಲ್ಲವ್ವ ದಾರಿ ಮಾಡಾಕ ಬಂದೇನಿ ಅಂದ ಗೌಡ್ರು ಛಲೋ ಸುದ್ಧಿನೇ ತಂದಿರತ್ತಾರ ಅನ್ನಕೊಂದು.
“ಗೌಡ್ರು ಎಲ್ಲಾ ನಿಮ್ಮ ಪಾಲಿಗೆ ಬಿದೈತಿ, ಆಂವ ನಡಕ ರಂಡೀ, ಮಾಡಿ ಹೋದ ಇದ್ದ ಬಿದ್ದವರೆಲ್ಲಾ ತಮ್ಮ ಭಾಳೇನ ಕಷ್ಟ ಐತಿ ಅಂತಾರು, ಇರುದೊಂದು ಈ ಸಣ್ಣಕೂಸು, ದುಡುದು, ದುಡುದು ಕಸು ಸತ್ತಿ ಹೋಗೈತ್ರಿ. ಮೈಯಾಗು ತ್ರಾಣ ಇಲ್ಲ”
ಹಂಗ್ಯಾಕ ಅಂತಿ ಬೀಡು, ನಮ್ಮ ಸಾಲ್ಯಾಗ ಬಿಸಿ ಊಟ ಮಾಡಾಕ ಗಂಡಸತ್ತಿ ಮಂದಿ ಬೇಕಂತ, ನೀನ್ನ ಸಾಲಿ ಸಟರ್ಿ ಫಿಕೇಟ್ ಒಂದು ರೇಡಿ ಮಾಡು, ನಿನ್ನ ಬಾಳೆಕ್ಕೆ ಒಂದ ದಾರಿ ಮಾಡತೇನಿ”
“ಎನಾರ ಮಾಡಿ ಪುಣ್ಯ ಕಟ್ಟಕೊಳ್ಳರೀ ಗೌಡ್ರ”
ಮ್ಯಾಲಕ್ಕೆದ್ದ ಗೌಡ ಚಹಾ ಕುಡೀರಿ ಅಂದ್ರೂ ತಡಮಾಡದ ಮುಚ್ಚಿಬಾಗಿಲು ದಾಟಿ, ಶಾಲೆ ದಾರಿ ಹಿಡಿದಿದ್ದ.
ಹಿರೇಮನಿ ನಾಗನಗೌಡನ ವಶೀಲಿಮ್ಯಾಗ ಶಾಲೆ ಸೇರಿದ್ದ ಕಲ್ಲವ್ವ ನಾಗನಗೌಡನ ದರ್ಪನ್ಯಾಗ ಶಾಲೆ ಮ್ಯಾಲೆ ತನ್ನದೆ ಆದ ಸಾಮ್ರಾಜ್ಯ ಸ್ಥಾಪಿಸಿದ್ದಳು.
ಶಾಲೆ ಚಾಲು ಆಗಿ ಒಂದ ತಾಸಿಗೆ, ಎಲ್ಲ ಕ್ಲಾಸಿನ ಬಾಗಿಲಗಳಿಗೆ ಚಹಾ ತಗೊಂಡು ಕಲ್ಲವ್ವ ಹಾಜರಾಗುತ್ತಿದ್ದಳು. ಅತ್ತಾಗ, ಇತ್ತಾಗ ತಲೆ ತಿರುಗಿಸಿ ಬೊರ್ಡ ಮ್ಯಾಲ ನಾಲ್ಕು ಅಕ್ಷರ ಬರೆದು, ಮಕ್ಕಳ ಹಾಜರಿ ಹಾಕಿ, ಇನ್ನೆನು ಒಂದನೇ ಘಂಟೆ ಹೋಡೆತೈತಿ ಅನ್ನುವದರೊಳಗ, ತಾಟಿನ ತಂಬ ಜೋಡಿಸಿಟ್ಟಿದ್ದ ಬಿಳಿ ಕಪ್ಪಿನೊಳಗ ಕುದಿಯುತ್ತಿದ್ದ ಚಹಾದ ಕೂಡ, ಕ್ಲಾಸಿನ ಬಾಗಿಲ ಬಡಿತ್ತಿದ್ದ ಕಲ್ಲವ್ವ, ಚಹಾಕೊಟ್ಟು ಹಂಗ ಬರುವ ಅಸನರೀ ಗಿರಾಕಿಯಂತೂ ಅಲ್ಲ, ಅರ್ಧ ಬ್ಲೌಸ್ ಹಾಕೊಂಡು ಶಾಲೆಗೆ ಬರುತ್ತಿದ್ದ ಹತ್ತಿ ಬಾಯಿಗೆ,
ಎನ್ರೀ ಅಕ್ಕವರ, ನೀಮಗೇನ ತೊಡಾಕ ಅರಿವಿ ಭಾಳ ಬೇಕಾಗುವದಿಲ್ಲ ಬೀಡ್ರಿ, ಇದ್ದ ಅರಿವ್ಯಾಗ ಪ್ಯಾಶನ್ ಮಾಡತೀರಿ, ಭಾಳರೊಕ್ಕ ಉಳುಸುವವರ ನೀವು ಕಣ್ಣು ಮಿಟುಕಿಸುತ್ತಿದ್ದಳು.
ತಂಬಾಕ ತಿಕ್ಕೊಂದು, ಹಲ್ಲಿನೊಳಗ ಹತಕಿ ಹಿಡಕೊಂಡು ಕಿಡಕಿಯೊಳಗ ಉಗಳಕ್ಕೊಂತ ನಿಂತಿರುತ್ತಿದ್ದ ಪ್ರುಜಾರ ಮಾಸ್ತರಗ
ಎನ್ರೀ ಮಾಸ್ತರ ನೀವ ಹೆಂಗಾರ ಮಾಸ್ತರ ಆದ್ರಿಯೋ, ಹೆಂಗ ಉಗಳಿ ಉಗಳಿ ಶಾಲಿ ತುಂಬ ಬರೇ ನಿಮ್ಮ ತಂಬಾಕ ವಾಸನಿನ ತುಂಬೈತಿ ದುರುಗಟ್ಟಿ ನೋಡುತ್ತಿದ್ದಳು.
ಕುಂತಲ್ಲೆ ತೂಕಡಿಸಿ, ತೂಕಡಿಸಿ ಕಣ್ಣ ಕೆಂಪಗ ಮಾಡಕೊಂಡಿದ್ದ ಕುದರಿ ಮಾಸ್ತರಗ ಬೆಳಕಾರು ಯಾಕ ಅಕ್ಕತಿ ಅಂತಿರೇನು, ರಾತ್ರಿಯೆಲ್ಲಾ ಭಜನೆ ಮಾಡ್ತಿರೇನು, ಎಲ್ಲ ಹೋದ್ರು ನಿಮ್ಮ ತೂಕಡಿಕೆ ನೀಲ್ಲುವದಿಲ್ಲ, ತಗೋರಿ ಚಹಾ ಕುಡಿರಿ, ನಿದ್ಯಾರ ಹೊಕೈತಿ. ಈಕಿ ಎನ ಅಂದ್ರು ಹಲ್ಲು ಕಿಸಿಯುವದನ್ನ ಬಿಟ್ರ ಕುದ್ರಿ ಮಾಸ್ತರಗ ಮತ್ತೇನು ಗೊತ್ತಿರಲಿಲ್ಲ.
ಬಸಲಿಂಗ ಮಾಸ್ತರನ ಹತ್ರ ಬಂದ ಕೂಡಲೇ ಕಲ್ಲವ್ವ ಕಲ್ಲಿನಂಗ ಕರಗಿಬಿಡುತ್ತಿದ್ದಳು. ಅವನ ಸಿಡಕ ಸ್ವಭಾವಕ್ಕೂ ಆಂವ ನಿಮಿಷಕೊಮ್ಮೆ ಕೆಬರುವ ಕೆಬರಾಟಕ್ಕೂ ಹೊಂದಾಣಿಕೆ ಇತ್ತು ಮೈ ತಿಂಡಿಯ ಸಂಕಟಕ್ಕ ಎದುರಿಗೆ ಬಂದವರಿಗೆ ಸಿಕ್ಕಂಗ ಬೈಯತ್ತಿದ್ದ ಅವನ ಸಮೀಪ ಹೋಗಾಕ ಅಂಜುತ್ತಿದ್ದರು. ಮದುವಿ ಇಲ್ಲ ಮುಂಜವಿ ಇಲ್ಲ ಇಲ್ಲದ ಉಸಾಬರಿ ಯಾಕಂತ, ಅವನ ಮುಂದ ಚಹಾ ಇಟ್ಟು ಹೊಕ್ಕಿದ್ದಳು.

ಇನ್ನೂ ಈ ಶಾಲೆಯ ದೇಖರಿಕೆಗೆ ಜಮಾ ಆದವನ್ನು ಗುರುಪ್ಪ ಮಾಸ್ತರ ಸಕರ್ಾರ 58 ವರ್ಷಕ್ಕ ಪೆನಶನ್ ಕೊಟ್ಟಿದ್ರ ಇಷ್ಟೊತ್ತಿನ್ಯಾಗ ರಿಟ್ರೆಡ್ ಆಗಿ ಮನ್ಯಾಗ ಇರುತ್ತಿದ್ದ. ಎಲ್ಲರೂ ಮುಂದ ನಂದೇನು ಭಾಳ ಇಲ್ಲ, ಇನ್ನ ಎಂಟು ತಿಂಗಳು ಮಾತ್ರ, ಸುಮ್ಮನ ಕಡೀ ಕಾಲದಾಗ ಯಾಕ ಇಲ್ಲದ ಉಸಾಬರಿ, ಶಾಲಿಯೊಳಗ ಹೊಸ ಯೋಜನೆ ಬಂದ್ರ ಸುಮ್ಮನ ಮುಚ್ಚಿ ಇಟ್ಟು, ಸಾಹೇಬ್ರಗಳಿಗೆಲ್ಲಾ ಎನಾದರೂ ಕೋಡುವದಿದ್ರ ಮುಂದಿನ ವರ್ಷ ಕೋಡ್ರಿ ತಲೆ ಮ್ಯಾಲಿನ ಗಾಂಧಿ ಟೋಪಿ ಸರಿ ಮಾಡಕ್ಕೊಂತ ದೈನಿಸಿ ಬೀಡುತ್ತಿದ್ದ. ತಿರುಗುವ ಖುಚರ್ಿ ಮ್ಯಾಲ ಕುಂತಗೊಂಡು ಎದೂರಿನ ಗಾಂಧಿ ಪೊಟೋ ನೋಡಕೊಂತ ಕುಂತ್ರ ದೊತ್ರದ ಚುಂಗಿನ ಕೊನೆ ಮಾಸ್ತರ.
ಕಟಮಳ್ಳಿ ಶಾಲೆಒಳಗೂ ಎಲ್ಲ ಕಡೆ ಇರುವಂಗ ಅವನ್ನ ಕಂಡ್ರ ಇವನ್ನ, ಇವನ್ನ ಕಂಡ್ರ ಅವನ್ನ ಹಿಂದ ಮುಂದ ಬೈಕೊಂತ, ಒಮ್ಮೆಮ್ಮೆ ನಕ್ಕೊಂತ ಸಭೆ ಸಮಾರಂಭ ಬಂದ್ರ ಓಡಾಡಿ ಹಬ್ಬ ಮಾಡಿದಂಗ ಮಾಡಕೊಂತ , ಒಂದ ಮನೆಯವರಂಗ ಕೂಡಿ ಹೊಂಟಿದ್ರು, ಆಸರಕಿ ಆದಾಗ ಅವರ ನೋವು, ಇವರು, ಇವರ ನೋವು ಇವರು, ಇವರ ನೋವು ಅವರು, ಮುಂದ ಅತ್ತ ಕರೆದು ಹಗುರ ಮಾಡತ್ತಿದ್ರು. ಇವರ ಎಲ್ಲಾ ಚಾಕರಿಗೂ ಕಲ್ಲವ್ವನ ಕರಾಮತ್ತ ಇರಲೇಬೇಕು. ಆಕೀ ನಾಲ್ಕು ಮಾತು ಸೇರಿಸದಾಗ ಅದು ಬರಬ್ಬರಿ ಆದಂಗ ಆಗುತ್ತಿತ್ತು.
ಆವಾಗ, ಈವಾಗ ಹೆಡ್ ಮಾಸ್ತರ ಆಫಿಸ್ ಕೆಲಸ ಅಂತಲೋ, ಮಿಟಿಂಗ್ ಅಂತಲೋ ಹೋದಾಗ ಶಾಲೆಗೆ ಬಸಲಿಂಗ ಮಾಸ್ತರನ ಹಿರೇತನಾ, ಅವತ್ತು ಎಲ್ಲಾರಿಗೂ ಆಫಿಸ್ ರೂಮ್ ಕ್ಲಾಸರೂಮ್ ಆಗತ್ತಿತ್ತು. ನೀ ಬಜಿ ತರಸ, ನೀ ವಗ್ಗರಣಿ ತರಸ ಆ ಸಾಹೇಬ ಭಾಳ ಖಡಕ್ ಅದಾನ, ಶಾಲೆ ಗೋಡೆಗೆಲ್ಲಾ ಬರೇ ಮಾತಿನ ಭರಾಟ ಬಡಿತ್ತಿತ್ತ. ಅಲ್ಲೆ ಅಡ್ಡಾಡುತ್ತಿದ್ದ ಕಲ್ಲವ್ವ, ಊರಾಗೀನ ಉಸಾಬರೀ ತಗೆದು ಕಿಡಕಿಗೇ ಜೋತು ಬೀಳುತ್ತಿದ್ದಳು. ಯಾವಾಕೀ, ಯಾವನ ಜೊತೆ ಅದಾಳು, ನೀನ್ನೆ ಯಾರ ಮನ್ಯಾಗ ಜಗಳಾ ಆತು, ಯಾರ ಹೊಲದಾಗ ಎಟ್ಟ ಬೆಳೆ ತಗದಾರು ಅಕೀ ಮಾತಾಡಕತ್ತರ ಒಂದಕ್ಕೊಂದು ವಿಷಯ ಜೋಡಣಾ ಆಗಿ ಇನ್ನ ಅವು ಮುಗಿಲ ಮುಟ್ಟಿ ಬರಬೇಕು ಅನ್ನವದರೋಳಗ ಹತ್ತಿ ಬಾಯಿ , ಬಾಯಿ ಹಾಕಿ. ಹೇ ಕಲ್ಲವ್ವ ಇಲ್ಲಿ ಒಗ್ಗರಣಿ ಹಾಕಿದ್ದು ಸಾಕು, ಒಂದಿಷ್ಟ ಅಡಿಗೆ ಮನೆ ಕಡೆ ನೋಡು ಎಚ್ಚರಿಸಿದಾಗ ಕಲ್ಲವ್ವ ಮುಖ ತಿವಿದು ಕಿಡಕಿ ಕೈ ಬಿಟ್ಟು ಆ ಕಡೆ ಹೆಜ್ಜೆ ಹಾಕುತ್ತಿದ್ದಳು.
ಮರು ದಿವಸ ಹೆಡ್ ಮಾಸ್ತರ ಬಂದಾಗ ಹಗರಕ ಗುರುಪ್ಪನ ಹತ್ತಿರ ಸುಳಿತ್ತಿದ್ದ. ಈಕೆ ನಿನ್ನೆ ಶಾಲೆ ತುಂಬ ಇವರೆಲ್ಲಾ ನಡೆಸಿದ್ದ ಹಕ್ಕಿಕತ್ತನ ಕದ್ದಿಲೇ ಅಂವನ ಕಿವ್ಯಾಗ ತುಂಬತ್ತಿದ್ದಳು. ಬರೇ ಆಫಿಸಿನ್ಯಾಗೆ ಕುಳುತ್ತಿದ್ದರು, ಒಬ್ಬರೂ ಕ್ಲಾಸಿಗೆ ಹೋಗಲಿಲ್ಲ, ಅಷ್ಟ ಯಾಕ ನಿಮಗೂ ಎನೇನ ಅಂತ್ತಿದ್ರೂ.
ಮಿಕಿ ಮಿಕಿ ಕಲ್ಲವ್ವನನ್ನ ನೋಡುತ್ತಿದ್ದ ಮಾಸ್ತರ ಉಗಳಕ್ಕೂ ಆಗದ ನೂಂಗಕ್ಕೂ ಆಗದ ಹೋಗಲೀ ಬೀಡ ಕಲ್ಲವ್ವ, ಅವರು ಎಷ್ಟು ಹೇಳಿದ್ರೂ ಅಷ್ಟ, ನಡೀ ನಡೀ ನೀ, ನಂದ ಕೆಲಸ ಭಾಳ ಐತಿ ಹಗರಕ ಆಕೆಯನ್ನ ಹೊರ ಹಾಕುತ್ತಿದ್ದ.
ಗಂಡ ಸತ್ತಮ್ಯಾಲ ಶಾಲೆ ಸೇರಿದ್ದ ವಟ ವಟ ಕಲ್ಲವ್ವ, ಗಂಡುಬೀರಿಯಂಗ ಇದ್ದರೂ, ರಾತ್ರಿ ಹೊತ್ತನ್ಯಾಗ ಹೆಣ್ಣತನದಲ್ಲಿ ನಲುಗುತ್ತಿದ್ದಳು. ಈಕೆಗೆ ಆಸರ ಆಗಿದ್ದ ನಾಗನ ಗೌಡನ ಹರೇ ಮಾಸಿ, ಕೋಲ ಬಡಿದ ನಾಯಿಯಂಗ ಕೆಮ್ಮಿ ಕೆಮ್ಮಿ ಮೂಲೆ ಹಿಡಿದ ಕುಂತ ಮ್ಯಾಲ ಈಕೆಗೆ ಜೋಡ ಆದವನೇ ಬಸಲಿಂಗ ಮಾಸ್ತರ, ಆತನ ಕೆಬರಾಟಕ್ಕ ಅಂಜಿ, ಒಮ್ಮೆಮ್ಮೆ ಎಲ್ಲಿ ನನಗೂ ರೋಗ ಹಚ್ಚಿಗಿಚ್ಚಿ ನನಗ ಜೀವ ಹೊದಂಗ ಆಗತೈತಿ ವಾಕರಿಕೆ ಮಾಡಕೊಂಡ ಅವನ ಸಮೀಪ ಹೋಗುತ್ತಿದ್ದಳು.
ಬಸಲಿಂಗ ಮಾಸ್ತರ ರಾತ್ರಿ ಹೊತ್ತಿನ್ಯಾಗ ಕಲ್ಲವ್ವನ ಮನೆ ಕಡೆ ಬರುವುದು ಕಟಮಳ್ಳಿ ಊರಿಗೇನ ದೊಡ್ಡ ಸುದ್ದಿ ಆಗಿರಲಿಲ್ಲ, ಆ ಕೆಬರ ಕೆಬಂಕಿ ಕಡೆ ಕಲ್ಲವ್ವ ಎನ ನೋಡಿದಳು ಎನೋ? ನಕ್ಕು ಸುಮ್ಮನಾಗಿದ್ದರು.
ಶಾಲೆಯೊಳಗ ಈಕೀ ಕೂಡ ಅಡುಗೆ ಮಾಡುವ ಇಂದಿರವ್ವ ಮತ್ತು ಮಕ್ತುಂಬಿ ಇವರ ಆಟ ನೋಡಿ ಮುಸಿ ಮುಸಿ ನಕ್ಕರೂ, ಆಗಾಗ ಆಂವ ಈಕೆಗೆ ಕೊಡಿಸುತ್ತಿದ್ದ ಹೊಸ ಪತ್ತಲ, ಬಂಗಾರದ ಒಲೆ ನೋಡಿ ಹೊಟ್ಟೆ ಕಿಚ್ಚು ಪಡುತ್ತಿದ್ದರು. ಕಲ್ಲವ್ವನ ಮಗ ನ್ಯಾಗ್ಯಾಗೆ ಕೊಡಿಸಿದ್ದ ಮೊಬೈಲು, ಜೀನ್ಸ ಪ್ಯಾಂಟ್ ಇವರಿಗೆ ಒಮ್ಮೆಮ್ಮೆ ಹುಳದಂಗ ಕಡಿತ್ತಿತ್ತು. ಸಂಜೆ ಮುಂದ ಚಹಾದಂಗಡಿ ಭಟ್ಟ ಕಾರ ಇದ್ದ ಮಿರಚಿ ಬಜ್ಜಿ ಕಟ್ಟಿಕೊಟ್ಟ, ಕಾರ ಭಾಳ ಆಗಿದ್ರೆ , ಕಲ್ಲವ್ವ ಗುಂಗ ಬಡಿಸ್ತಾಳ ಬೀಡ್ರಿ ಗುರುಗಳ ಇಂವಗ ಗುಂಗ ಹಿಡಿಸತ್ತಿದ್ದ ಶಾಲೆಯೊಳಗ ಯಾವಾಗಲಾದ್ರೂ ,ಹೆಡಮಾಸ್ತರ ಕಲ್ಲವ್ವಗ ಗುರ್ ಅಂದ್ರ , ಬಸಲಿಂಗ ನಡುವೆ ಬಾಯಿ ಹಾಕಿ ಈಕೀಯ ಪರವಾಗಿ ವಾದ ಮಾಡುತ್ತಿದ್ದ
ಆವತ್ತು ಮಟ ಮಟ ಮಧ್ಯಾನದ ಹೊತ್ತಿನ್ಯಾಗ ಕಲ್ಲವ್ವನ ಹತ್ತಿರ ಬಂದ ಬಸಲಿಂಗ ಮಾಸ್ತರ ಆಕೆಯ ಮನೆ ಕೀಲಿ ಕೈ ತೆಗೆದುಕೊಂಡು, ತಲೆ ನೋವಿನ ನೆಪ ಮಾಡಿ ಕಲ್ಲವ್ವನ ಮನೆ ದಾರಿ ಹಿಡಿದ, ಈಕೆ ಒಂದು ಸುತ್ತು ಶಾಲೆಯನ್ನೆಲ್ಲಾ ಸುತ್ತಾಡಿದಳು. ಆಕೆಯ ತಲೆಯಲ್ಲಿ ಸಂಶಯದ ಹುಳ ಕೊರೆಯತೊಡಗಿತು. ಕೆರಕ ಮಾಸ್ತರನ ಕಚ್ಚೆಯಾಟ ನೋಡಿದ್ದ ಕಲ್ಲವ್ವನ ಎದೆ ಧಸಕ್ಕೆಂದಿತು. ತಡ ಮಾಡಿದ್ರ ಘಾತವಾದಿತು. ಆಕೆಯ ಕಾಲಲ್ಲಿ ಕಸು ಇಮ್ಮಡಿಯಾಯಿತು. ಕೊತ ಕೊತ ಕುದಿಯುತ್ತಿದ್ದ ಅನ್ನಕ್ಕೆ ಉಪ್ಪು ಎಸೆಯುವುದನ್ನ ಬಿಟ್ಟು ಸುಡುತ್ತಿದ್ದ ರಸ್ತೆಯಲ್ಲಿ ಓಡತೊಡಗಿದಳು.
ಕಿಡಕಿಯ ಕದ ಸರಸಿ ಇಣುಕಿ ನೋಡಿದಳು, ಆಕೆಯ ಕಾಲು ತರ ತರ ನಡುಗಿತು. ಮೈ ಕೂದಲೆಲ್ಲಾ ಸೆಟೆದುನಿಂತವು, ಆಕೆಯ ಕಣ್ಣು ಆಕೆ ನಂಬಳಾದಳು. ಬಸಲಿಂಗ ಮಾಸ್ತರನ ಬಾನಗಡಿ ಕೆಲಸಕ್ಕ ಬೆಚ್ಚಿ ಬಿದ್ದಳು. ತಡ ಮಾಡಿದರ ಎಲ್ಲಿ ಈ ಬಾಡಕೋ ಎಲ್ಲ ಮುಗಿಸಿಬಿಡತಾನು ತನ್ನ ಕಾಲಾಗಿನ ಕಾಲ್ಮರಿಗೆಯನ್ನು ಕೈಯಾಗ ಹಿಡಿದ ಕಲ್ಲವ್ವ ಕದ ಬಡಿಯ ತೊಡಗಿದಳು ಲೋ ಮಾಸ್ತರ ಕದಾ ತಗೀ, ಲೋ ಮಾಸ್ತರ ಕದಾ ತಗಿ ಕಲ್ಲು ಎಸೆಯುವಂಗ ಕದಬಡಿದಳು.
ಈಕೀ ಕದ ಬಡಿಯುವ ಗಸನೀಗೆ ಬಸಲಿಂಗ ಮಾಸ್ತರನ ಮೈಯಾಗ ಬೆವರ ಹನಿ ಹರ್ಯಾಕ ಶುರು ಆತು ಹೇ ಕಲ್ಲವ್ವ ಎನ ಆತು, ಇಂಗ್ಯಾಕ ಮಾಡಾಕ್ಕತ್ತಿ, ಓಡಿಬಂದು ಕದ ತೆಗೆದು ದೂರ ಸರಿದು ನಿಂತ, ಆಕೆಗೆ ಸಿಟ್ಟು ತಡ್ಯಾಕ ಆಗಲಿಲ್ಲ ಕಾಲ್ಮರಿಗೆ ತಗೊಂಡು ಬಸಲಿಂಗನ ಮಾರಿ ಮ್ಯಾಲ ರಪ ರಪ ಬಾರಿಸಿದ್ದಳು. ಬೊಸಡೀ ಮಗನ ಎಷ್ಟ ಕಸಬೀ ಮಗ ನೀನು, ನಿನ್ನಂತಾರು ಯಕಾದ್ರ ಈ ಭೂಮಿ ಮ್ಯಾಗ ಭಾರ ಆಗೀರಿ, ನೀ ಸೆಟೆದು ಸುಡಗಾಡು ಸೇರು, ನೀನ್ನ ಸಿದಗಿ ಸಿಂಗಾರ ಆಗಲಿ ಆಕೆಯ ಸಿಟ್ಟು ನಿಲ್ಲುವ ಲಕ್ಷಣನೇ ಇರಲಿಲ್ಲ, ಮುಖದ ತುಂಬ ಪೆಟ್ಟತಿಂದ ಆತ ಮುಖ ಮೊತಿ ಒರಸಕ್ಕೊಂತ ಜೀವ ಊಳಿದ್ರ ಸಾಕಂತ ಆಕೆಯಿಂದ ತಪ್ಪಿಸಿಕೊಂಡು ಪಾರಾಗಿ ಹಿತ್ತಿಲ ಬಾಗಿಲಿನಲ್ಲಿ ಓಡಿಹೋದ,
ಇದನೆಲ್ಲಾ ಆಶ್ಚರ್ಯದಿಂದ ನೋಡುತ್ತ ನಿಂತಿದ್ದ ಆರನೇಯ ತರಗತಿ ಹುಡುಗಿ ನಿರ್ಮಲಾನ್ನ ಗಟ್ಟಿಯಾಗಿ ಅಪ್ಪಿಕೊಂಡ ಕಲ್ಲವ್ವ ಮಗಳ ನೋವು ಆತೇನು, ಆ ಬಾಡ್ಯಾನ
ಕೂಡ ಯಾಕ ಬಂದಿಯವ್ವಾ , ಆಂವ ರಾಕ್ಷಸ,ನೀಚ,ಇನ್ನೊಮ್ಮೆ ಅವನ ಕೂಡ ಹೋಗಬ್ಯಾಡ ಮಗಳ ಹುಡುಗಿಯನ್ನು ತಬ್ಬಿಕೊಂಡು ಅಳಹತ್ತಿದಳು.
ಈ ಸುದ್ದಿ ಬರೇ ಕಲ್ಲವ್ವನ ಮನಸ್ಸಿನ್ಯಾಗ ಉಳಿದಿದ್ದು ಬಸಲಿಂಗ ಮಾಸ್ತರನ ಜೀವ ಉಳಸಿತ್ತು. ಅವತ್ತಿನಿಂದ ಈಕೀ ಎದುರುಗೆ ಬಂದ್ರ ತಲೆ ತಗ್ಗಿಸತಿದ ಆಂವ , ಆಕೆ ಕೆಕ್ಕರಿಸಿ ನೋಡುವ ಸಿಟ್ಟಿಗೆ ತಣ್ಣಗ ನಡಗುತ್ತಿದ್ದ ಅವನ ಸಮೀಪ ಬಂದ ಆಕೆ ಮಗನ ಹೋಗಲೀ, ಬಿಡ ಅಂತ ಬಿಟ್ಟೇನಿ, ನೀನು ಇನ್ನೊಮ್ಮೆ ಇಂತಹ ನೀಚ ಕೆಲಸಕ್ಕ ಕೈ ಹಾಕಿದ್ರ, ಊರಾಗಿನ ಮಂದಿಗೆ ಹೇಳೋದಿಲ್ಲ, ಕುಡುಗೊಲು, ತಗೊಂಡು ನಾನ ಕೊಚ್ಚಿ ಹಾಕ್ತಿನಿ ಹಾದರಗಿತ್ತಿ ಮಗನ. ಥೂ ಅಂತೇಳಿ ಆಕಿ ಊಗಳಿ ಹೋದಾಗ ಬಸಲಿಂಗನ ಮೂತಿಯ ರಕ್ತ ಹೆಪ್ಪುಗಟ್ಟಿ ಕರ್ರಗ ಆತ.
ಆತನ ತಲ್ಯಾಗ ಕೋರಿತಿದ್ದ ಹುಳಕ್ಕ ಚುಮನಿ ಎಣ್ಣಿ ಗೊಜ್ಜಿದಂಗ ಆತು. ಆಂವ ಬರೊಬ್ಬರಿ ಟೈಮಕ್ಕ ಕಾಯುತ್ತಿದ್ದ, ಶಾಲೆಯೊಳಗಿನ ಕೆಲಸ ಕಡಿಮೆ ಆದ ಕೂಡಲೇ ಹೆಡ್ ಮಾಸ್ತರ ಗುರಪ್ಪ, ಕಲ್ಲವ್ವನ ಮಾತಿನ ಚಟಕ್ಕ ಮರಳಾಗಿ ಅಡುಗೆ ಮನೆ ಹೊಕ್ಕುಂಡ ಕೂಡ್ರವ ಚಾಳಿ ಭಾಳ ಇತ್ತು. ಇದನ್ನ ಸಾಧಿಸತ್ತಿದ್ದ ಬಸಲಿಂಗ ಒಮ್ಮೆ ಅವರಿಬ್ಬರ ಅಡುಗೆ ಮನೆಯೊಳಗ ಇದ್ದಿದ್ದನ ಖಾತ್ರಿ ಮಾಡಕೊಂಡು ಅಡುಗೆ ಮನೆಯ ಕದ ಮುಚ್ಚಿ ಚಿಲಕ ಹಾಕಿದ ಲಭೋ ಲಭೋ ಒಕ್ಕೋಳಾಕ ಆರಂಭಿಸಿದ ಅಯ್ಯೊ ದೇವ್ರ ನೋಡ ಬರ್ರ್ಯೋ , ನೋಡ ಬರ್ರೀ. ದೇವರಂತ ಶಾಲೆಯೊಳಗ ಎಂತಹ ಕೆಲಸ ಮಾಡಾಕತ್ತಾರ ನೋಡಬರ್ರೀ ಕೂಗಿ ಕೂಗಿ ಚಿರಾಡುತ್ತ ಗಿಡದ ಕೇಳಗಿನ ಕಟ್ಟಿಮ್ಯಾಲ , ಶಾಲೆಮುಂದಿನ ಬಸ್ಸ್ಯಾಂಡಿನ್ಯಾಗ ನಿಂತ ಮಂದಿನೆಲ್ಲಾ ಕರಕೊಂಡು ಬಂದು ಗದ್ದಲ ಶುರುಮಾಡಿದ.
ಊರಮಂದಿ ಶಾಲೆಯ ಅಡುಗೆ ಮನೆ ಬಾಗಿಲ ಬಡಿಯಾಕ ಆರಂಭಿಸಿದರು. ಒಳಗೆ ಗುರಪ್ಪ ಮಾಸ್ತರ ವಕ ವಕ ತೇಕ ತೊಡಗಿದ :ಅಯ್ಯೊ ಯಪ್ಪಾ ನಾನೇನು ತಪ್ಪ ಮಾಡಿಲ್ಲರೀ, ನಾನು ರಿಟ್ರೆಡ್ ಆಗಾಕ ಎಂಟ ತಿಂಗಳ ಐತಿ ದಮ್ಮ ಹೆಚ್ಚಾಗಿ ಕೆಮ್ಮಿ ಕೆಮ್ಮಿ ಉಸಿರು ಒಳಗ ಹೊರಗ ಬೀಡುತ್ತ ಬೀಳತೊಡಗಿದ. ಮಾಸ್ತರನ ಪಿಕಲಾಟ ನೋಡಿ ಕನಿಕರಗೊಂಡ ಕಲ್ಲವ್ವ ಜಾರಿ ಬೀಳುತ್ತಿದ್ದ ಅವನನ್ನ ಗಟ್ಟಿಯಾಗಿ ಹಿಡಿದುಕೊಂಡು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ನೇತ್ತಿಗೆಲ್ಲಾ ನೀರ ಚಿಮಕಿಸಿ ಮೃದುವಾದ ಆತನ ತಲೆ ಸವರತೊಡಗಿದಳು.
*****************************





kone pyara innu chennagi barabekithu annisuthade
ಒಳ್ಳೆ ಕಥೆ